ಆಂಜಲಸ್ ಸೈಲೀಷóಸ್
(1624-77) ಜರ್ಮನಿಯ ಅನುಭಾವಿ ಕವಿ. ಇವನ ನಿಜವಾದ ಹೆಸರು ಯೊಹಾನಸ್ ಷೆಫ್‍ಲರ್. ವೃತ್ತಿಯಲ್ಲಿ ವೈದ್ಯನಾಗಿದ್ದ ಈತ ರೋಮನ್‍ಕ್ಯಾಥೋಲಿಕನಾಗಿ ಮತಾಂತರಹೊಂದಿದಾಗ ಹೆಸರನ್ನು ಬದಲಾಯಿಸಿಕೊಂಡ. 1661ರಲ್ಲಿ ಮತಬೋಧಕನಾದ. ಅವನ ಎರಡು ಕವನ ಸಂಕಲನಗಳು ಬಹು ಪ್ರಸಿದ್ಧವಾಗಿವೆ: ಡರ್ ಷೆರುಬಿನಿಷೆ ವಾಂಡರ್‍ಸ್ಮನ್ ಮತ್ತು ಹೈಲೀಗ್ ಸೇಲೆನ್‍ಲಸ್ಟ್. ಮೊದಲನೆಯದರಲ್ಲಿ ಅನುಭವತತ್ತ್ವ ನಾಡುನುಡಿಯ ರೂಪದಲ್ಲಿ ಉಜ್ಜ್ವಲವಾಗಿ ನಿರೂಪಿತವಾಗಿದೆ. ಎರಡನೆಯದು ಆಧ್ಯಾತ್ಮಿಕ ಗ್ರಾಮಾಂತರ ಕವನಗಳ ಸಂಕಲನ. ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟ್ ಮತಗಳ ಕ್ರಾಂತಿ ಮರುಕ್ರಾಂತಿಗಳ ಕಾಲದಲ್ಲಿ ಈ ಕವನಸಂಕಲನಗಳು ಎರಡು ಪಕ್ಷದವರ ಮೇಲೂ ಪ್ರಭಾವವನ್ನು ಬೀರಿವೆ.					
(ಜಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ